ಪೆಡಿಸಲ್ಲೇರಿಯ 
ಕಂಟಕಚರ್ಮಿ ವಂಶದ ಆಸ್ಟೆರಾಯ್‍ಡಿಯ ಮತ್ತು ಎಕೈನಾಯ್‍ಡಿಯ ವರ್ಗಕ್ಕೆ ಸೇರಿದ ಪ್ರಾಣಿಗಳಲ್ಲಿ ಮಾತ್ರ ಕಾಣಬರುವ ವಿಶೇಷ ರಚನೆಗಳು. ಇವು ಇಕ್ಕಳದಂತೆ ಕಾರ್ಯನಿರ್ವಹಿಸಲು ತಕ್ಕಂತೆ ಮಾರ್ಪಾಟಾಗಿರುವ ಮುಳ್ಳುಗಳೆಂದು ಬಗೆಯಲಾಗಿದೆ. ಈ ವರ್ಗಗಳ ಪ್ರಾಣಿಗಳ ದೇಹದ ಮೇಲಿರುವ ಮುಳ್ಳುಗಳ ಮಧ್ಯೆ ಅಲ್ಲಲ್ಲಿ ಇವು ಕಾಣಬರುವುವು.

	ಆಸ್ಟೆರಾಯ್ಡಿಯ ವರ್ಗದ ಪ್ರಾಣಿಗಳಲ್ಲಿ ಊಧ್ರ್ವಭಾಗದಲ್ಲಿ ಮಾತ್ರ ಇವು ಇರುವುವು. ಪ್ರತಿ ಪೆಡಿಸಲ್ಲೇರಿಯದಲ್ಲಿ ಒಂದು ಉದ್ದನೆಯ ತೊಟ್ಟು ಮತ್ತು ತೊಟ್ಟಿನ ತುದಿಯಲ್ಲಿ ಮೂರು ಅಲಗು ಇಲ್ಲವೆ ದವಡೆಗಳುಂಟು. ತೊಟ್ಟಿನ ಒಳಭಾಗದಲ್ಲಿ ಸುಣ್ಣವಸ್ತುವಿನ ಆಧಾರ ದಂಡ ಇದೆ. ದವಡೆಗಳಿಗೆ ಕೆಲವು ಸ್ನಾಯುಗಳ ಸಂಪರ್ಕವಿದ್ದು ಇದರಿಂದ ಚಲನೆಗೆ ಅನುಕೂಲವಾಗಿವೆ.

	ಪೆಡಿಸಲ್ಲೇರಿಯಗಳಲ್ಲಿ ಜಿಮ್ಮಿಫಾರಮ್ ಅಥವಾ ಗ್ಲಾಬಿಫರಸ್, ಟ್ರೈಡೆಂಟೇಟ್, ಟ್ರೈಫೋಲಿಯೇಟ್ ಮತ್ತು ಆಫಿಯೊಸಿಫ್ಯಾಲಸ್ ಎಂಬ ನಾಲ್ಕು ಬಗೆಗಳಿವೆ.

	ಮೊದಲನೆಯ ಬಗೆಯ ಪೆಡಿಸಲ್ಲೇರಿಯದಲ್ಲಿ ತೊಟ್ಟಿನ ಒಳಗಿನ ಆಧಾರದಂಡ ತೊಟ್ಟಿನ ತುದಿಯ ವರೆಗೆ ಚಾಚಿದೆ ಹಾಗೂ ಇದರ ಅಲಗುಗಳು ಉದ್ದವಾಗಿಯೂ ಚೂಪಾಗಿಯೂ ತುದಿಯಲ್ಲಿ ಬಾಗಿದಂತೆಯೂ ಇವೆ. ಪ್ರತಿ ಅಲಗಿನಲ್ಲಿ ಒಂದು ಜೊತೆ ವಿಷಗ್ರಂಥಿಗಳುಂಟು. ಉಳಿದ ಮೂರು ತೆರನ ಪೆಡಿಸಲ್ಲೇರಿಯಗಳಲ್ಲಿ ಆಧಾರ ದಂಡ ತೊಟ್ಟಿನ ಬುಡಭಾಗದಲ್ಲಿ ಮಾತ್ರ ಉಂಟು. ಟ್ರೈಡೆಂಟೇಟ್ ಬಗೆಯಲ್ಲಿ ಅಲಗುಗಳು ತ್ರಿಕೋಣಾಕಾರದವೂ ಟ್ರೈಫೋಲಿಯೇಟ್ ಬಗೆಯಲ್ಲಿ ಎಲೆಯ ಆಕಾರದವೂ ಆಫಿಯೊಸಿಫ್ಯಾಲಸ್ ಬಗೆಯಲ್ಲಿ ಅಗಲವಾದವೂ ಆಗಿವೆ.

	ಜೆಮ್ಮಿಫಾರಮ್ ಪೆಡಿಸಲ್ಲೇರಿಯಗಳು ಪೆರಿಸ್ಟೋಮ್ ಬಿಟ್ಟು ಚಿಪ್ಪಿನ ಉಳಿದೆಡೆಗಳಲ್ಲೆಲ್ಲ ಕಾಣಬರುವುವು. ಇತರ ಎರೆಪ್ರಾಣಿಗಳನ್ನು ಕೊಲ್ಲಲು ಇವು ಬಳಕೆಯಾಗುತ್ತವೆ. ಟ್ರೈಡೆಂಟೇಟ್ ಹಾಗೂ ಆಫಿಯೊಸಿಫ್ಯಾಲಸ್ ಬಗೆಗಳು ಎರೆಪ್ರಾಣಿಗಳನ್ನು ಸೆರೆಹಿಡಿಯಲು ಸಹಾಯಕವಾಗಿವೆ. ಟ್ರೈಫೋಲಿಯೇಟ್ ಬಗೆಯದು ಪ್ರಾಣಿಯ ದೇಹದ ಮೇಲೆ ಉಳಿಯಬಹುದಾದ ಪರವಸ್ತುಗಳನ್ನು ತೆಗೆದುಹಾಕಿ ಪ್ರಾಣಿಯ ದೇಹವನ್ನು ಶುಚಿಯಾಗಿಡಲು ನೆರವಾಗುತ್ತದೆ.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ